ಜೀವನೋತ್ಸಾಹ ಮತ್ತು ವಿಷಾದ ಹಾಸುಹೊಕ್ಕಾಗಿರುವ ಸಂಗತಿಗಳನ್ನು ಬಿ.ಯು. ಗೀತಾ ಸೊಗಸಾಗಿ ಹಿಡಿದಿಡಬಲ್ಲ ಕಾದಂಬರಿಕಾರರು ಗೀತಾ ಸಂಭಾಷಣೆಯಲ್ಲೇ ಕತೆ ಕಟ್ಟುತ್ತಾ ಹೋಗುತ್ತಾರೆ. ಜೀವನಾನುಭವ, ಕಲ್ಪನೆ ಮತ್ತು ಬಾಲ್ಯದ ನೆನಪುಗಳೊಂದಿಗೆ ಬರೆಯುವ ಗೀತಾ ಸೃಷ್ಟಿಸುವ ಪಾತ್ರಗಳು ಕೂಡ ಬದುಕಿಗೆ ಅಂಟಿಕೊಂಡಂತೆ ಇರುತ್ತವೆ. ಹಾಲಲ್ಲಿ ಕೆನೆಯಾಗಿ ಕಾದಂಬರಿಯ ಶೀರ್ಷಿಕೆಯಲ್ಲೇ ಗೀತಾ ಅವರಿಗೆ ವಿಶಿಷ್ಟವಾದ ಸಂವೇದನೆ ಮತ್ತು ಕೌಟುಂಬಿಕ ಒಳನೋಟ ಕಾಣಿಸುತ್ತದೆ ಹಾಲಿನ ಕೆನೆಯಾಗಬೇಕಾದರೆ ಹಾಲು ಕುದಿಯಬೇಕು ನಂತರ ತಣಿಯಬೇಕು. ಹೆಣ್ಣಿನ ಬದುಕು ಕೂಡ ಇಂಥದ್ದೇ ಚಕ್ರದಲ್ಲಿ ಸಿಲುಕಿ ಅನುಭವಿಸುವ ಉದ್ದೇಗದ ಅಳಲು, ನಿರಾತಂಕದ ಹುಯಿಲು ಈ ಕತೆಯನ್ನು ಸುಪ್ತವಾಗಿ ಪೊರೆಯುತ್ತದೆ. ಕತೆ, ಕಾದಂಬರಿ, ಸಂಭಾಷಣೆ ಬರೆಯುತ್ತಾ ಬದುಕಿನ ರುಚಿ ಹೆಚ್ಚಿಸುವ ಸಂಗತಿಗಳ ಬಗ್ಗೆ ವಿಶೇಷ ಪ್ರೀತಿಯುಳ್ಳ ಗೀತಾ ಅವರ ಅನೇಕ ಕಾದಂಬರಿಗಳನ್ನು ನಾನು ಸ್ವಯಿಚ್ಛೆಯಿಂದ ಓದಿದ್ದೇವೆ. ಅವರು ಬರೆದ ಧಾರಾವಾಹಿಗಳನ್ನು ನೋಡಿದ್ದೇನೆ. ಅವರು ಅಭಿನಯ ಚತುರರೂ ಹೌದು. ಅವರ ಬಳಗ ಕೂಡ ದೊಡ್ಡದು. ಅವರ ಜೀವನಪ್ರೀತಿ, ಹುರುಪು ಮತ್ತು ಇಂಗಿತಜ್ಞತೆ ಅವರೊಳಗಿರುವ ಕಾದಂಬರಿಕಾರ್ತಿಯ ನೆರವಿಗೆ ಬಂದಿದೆ. ಹೀಗಾಗಿಯೇ ಸರಳವಾಗಿ ಸಾಗುವ ಕಾದಂಬರಿಗಳಲ್ಲೂ ಜೀವಕ್ಕೆ ಹತ್ತಿರವೆನಿಸುವ ಸನ್ನಿವೇಶ, ಮಾತು, ಅಂತರಾರ್ಥಗಳು ಮಿಂಚುವಂತೆ ಗೀತಾ ಬರೆಯುತ್ತಾರೆ. ಈ ಕಾದಂಬರಿಯಲ್ಲಿ ಅವರ ಬಾಲ್ಯ, ತಾರುಣ್ಯ ಮತ್ತು ನಡುವಯಸ್ಸಿನ ವಿವೇಕ ಬೆರೆತಿದೆ. ಹೀಗಾಗಿ ಇದು ಕೆನೆಗಟ್ಟಿದೆ. ಜೋಗಿ